ಪಕ್ಕಾ ಪೈಸಾ ವಸೂಲ್ ನಟಸಾರ್ವಭೌಮ – ಹೆಸರಿಗೆ ತಕ್ಕ ಅಭಿನಯ – ಪವನ್ ಒಡೆಯರ್ ಜಾದು

0
69

ಗಗನ್ ದೀಕ್ಷಿತ್ ಅಲಿಯಾಸ್ ಪುನೀತ್ ರಾಜ್ ಕುಮಾರ್ ಇಲ್ಲಿ ಬೆಸಿಕಲಿ ಪತ್ರಕರ್ತ. ಕಲ್ಕತ್ತಾದಲ್ಲಿ ಕೆಲ್ಸ ಮಾಡುವ ಹುಟ್ಟು ಕನ್ನಡಿಗ ಗಗನ್, ಯಾರದ್ದೋ ಹುಡುಕಾಟದಲ್ಲಿ ಬೆಂಗಳೂರಿಗೆ ಬರ್ತಾ್ನೆ. ಬೆಂಗಳೂರಿನಲ್ಲಿ ಕೆಲ್ಸ ಮಾಡಲು ಮುಂದಾಗ್ತಾನೆ. ಕೇಂದ್ರ ಸಚಿವ ಘನ್ ಶ್ಯಾಮ್ ಯಾದವ್ ಅಲಿಯಾಸ್ ರವಿಶಂಕರ್ ಅವ್ರನ್ನೂ ಇದೇ ವೇಳೆ ಘಟನೆಯಲ್ಲಿ ಕಾಪಾಡುತ್ತಾನೆ. ಆ ನಂತರ ಭೂತದ ಮನೆಯಂಥನೇ ಸುತ್ತ ಮುತ್ತ ಏರಿಯಾದಲ್ಲಿ ಅಪಖ್ಯಾತಿ ಗಳಿಸಿದ ಮನೆಯಲ್ಲಿ ಪುನೀತ್ ವಾಸ ಮಾಡಲು ಶುರುಮಾಡಿದಾಗ, ನಿಜವಾದ ಕಥೆ ತೆರೆದುಕೊಳ್ಳುತ್ತೆ.ಬಾಡಿಗೆ ಮನೆಯಲ್ಲಿ ಪುನೀತ್ ಹಾಗೂ ಚಿಕ್ಕಣ್ಣ ಪಡುವ ಪಾಡುಗಳನ್ನ ಎಂಜಾಯ್ ಮಾಡುವಷ್ಟರೊಳಗೆ, ಸಾಕ್ಷಿ ಅಲಿಯಾಸ್ ಡಿಂಪಲ್ ಕ್ವೀನ್ ರಚಿತಾ ರಾಮ್ ಎಂಟ್ರಿಯೂ ಆಗುತ್ತದೆ. ಅನಾಮಿಕ ವ್ಯಕ್ತಿಯ ಹುಡುಕಾಟದಲ್ಲಿರುವ ಪುನೀತ್‌ಗೆ ರಚಿತಾ ರಾಮ್ ಸಹಾಯ ಮಾಡಲು ಮುಂದಾಗ್ತಾರೆ. ಇದ್ರ ನಡುವೆ.. ಪುನೀತ್ ಹಾಗೂ ರಚಿತಾ ನಡುವಿನ ಸನ್ನಿವೇಶಗಳು.. ಇಬ್ಬರನ್ನೂ ಮತ್ತಷ್ಟು ಹತ್ತಿರವನ್ನಾಗಿಸುತ್ವೆ. ಹೀಗೆ ಸಾಗುವ ಕಥೆ, ದ್ವೀತಿಯಾರ್ಧದಷ್ಟೊತ್ತಿಗೆ ಮತ್ತೊಂದು ಮಗ್ಗಲಿನತ್ತ ತಿರುಗುತ್ತೆ. ಇದೇ ವೇಳೆ ನಡೆಯುವ ಹೊಡೆದಾಟಗಳೂ.. ಪ್ರೇಕ್ಷಕರನ್ನ ಸೀಟಿನ ಅಂಚಿಗೆ ಕರೆದುಕೊಂಡು ಬರುತ್ತೆ. ಮುಂದೇನಾಗುತ್ತೆ ಅನ್ನುವ ಕೂತುಹಲಕ್ಕೂ ಕಾರಣವಾಗುತ್ತೆ.

ಇದೆಲ್ಲದ್ರ ನಡುವೆ, ಕಲ್ಕತ್ತಾದ ಫ್ಲ್ಯಾಶ್ ಬ್ಯಾಕ್ ಕೂಡಾ ತೆರೆದುಕೊಳ್ಳುತ್ತೆ. ಅಷ್ಟಕ್ಕೂ ಪುನೀತ್ ಹುಡುಕಾಡ್ತಿರುವ ಅನಾಮಿಕ ವ್ಯಕ್ತಿ ಯಾರು, ಪುನೀತ್ ಮೈ ಮೇಲೆ ಪ್ರೇತಾತ್ಮ ಬರುತ್ತಾ, ಪುನೀತ್ ಯಾಕೆ ಆಗಾಗಾ ಬದಲಾಗ್ತಾರೆ, ಪುನೀತ್‌ಗೂ ಪ್ರೇತಾತ್ಮಕ್ಕೂ ಇರುವ ಸಂಬಂಧವೇನು. ನಿಜಕ್ಕೂ ಪುನೀತ್ ವಾಸವಿದ್ದ ಮನೆಯಲ್ಲಿ ಭೂತವಿದೆಯಾ, ಅದ್ಯಾವ ಸೇಡಿನ ಕಥೆ ನಟಸಾರ್ವಭೌಮನ ಅಂಗಳದಲ್ಲಿದೆ. ಚಿತ್ರದಲ್ಲಿ ನಾಯಕಿ ಅನುಪಮಾ ಪರಮೇಶ್ವರ್ ಪಾತ್ರವೇನು. ಅಷ್ಟಕ್ಕೂ ಚಿತ್ರಕ್ಕೆ ನಟಸಾರ್ವಭೌಮ ಎಂಬ ಹೆಸರು ಇಟ್ಟಿರೋದಾದ್ರೂ ಯಾಕೆ. ಇವೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನ ನೀವ್ ಚಿತ್ರಮಂದಿರದಲ್ಲೇ ನೋಡಿ ಪಡಿಬೇಕು. ಇನ್ನೂ ನಟಸಾರ್ವಭೌಮನನ್ನ ಪೂರ್ತಿಯಾಗಿ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಇಲ್ಲಿ ಪುನೀತ್ ನೋಡೋದೇ ಅಭಿಮಾನಿಗಳಿಗೆ ಹಿತವಾದ ಅನುಭವ. ಎರಡು ಶೇಡ್‌ಗಳಲ್ಲೂ ಪುನೀತ್ ಅಭಿನಯ ಟಾಫ್ ಕ್ಲಾಸಿನಲ್ಲಿದೆ.

ಇನ್ನೂ ಚಿಕ್ಕಣ್ಣ ಜೊತೆಗಿನ ಸನ್ನಿವೇಶಗಳೂ ಪವರ್ ಸ್ಟಾರ್ ಕಾಮಿಡಿ ಟೈಮಿಂಗ್‌ಗೆ ಹಿಡಿಯಬಹುದಾದ ಚಿಕ್ಕ ಕೈಗನ್ನಡಿ. ನಟಸಾರ್ವಭೌಮದ ಇನ್ನೊಂದು ಕಳೆ ಅಂದ್ರೆ ಅದು ಅನುಪಮಾ ಪರಮೇಶ್ವರ್. ಹೌದು, ದ್ವೀತಿಯಾರ್ದದಲ್ಲಿ ಬರುವ ಅನುಪಮಾ, ಇದಷ್ಟು ಹೊತ್ತು ಇಷ್ಟವಾಗ್ತಾರೆ. ಅಭಿನಯದಿಂದ ಗಮನಸೆಳೆಯುತ್ತಾರೆ. ನಟಸಾರ್ವಭೌಮನಲ್ಲಿ ನಿರಾಸೆಯಾಗೋದು ರಚಿತಾರಾಮ್ ವಿಚಾರದಲ್ಲಿ. ಹೌದು, ಇಲ್ಲಿ ರಚಿತಾ ಪಾತ್ರಕ್ಕೆ ಹೇಳಿಕೊಳ್ಳುವ ಪ್ರಾಮುಖ್ಯತೆ ಇಲ್ಲ.ನಟಸಾರ್ವಭೌಮದಲ್ಲಿ ರವಿಶಂಕರ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ರಾಜಕೀಯದ ಅರ್ಥವನ್ನ ಹೇಳುವ ರವಿಶಂಕರ್, ಇಲ್ಲೂ ಅಭಿನಯದಿಂದ ಅಭಿಮಾನಿಗಳ ಮನ ಗೆಲ್ಲುತ್ತಾರೆ. ಅಲ್ಲಲ್ಲಿ ನಗಿಸುತ್ತಾ, ಅಲ್ಲಲ್ಲಿ ಕಣ್ಣಲ್ಲೇ ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ರವಿಶಂಕರ್ . ಇಲ್ಲಿ ನಗಿಸುವ ಜವಾಬ್ಧಾರಿ ಸಾಧು ಕೋಕಿಲಾ ಹಾಗೂ ಚಿಕ್ಕಣ್ಣಗೆ ವಹಿಸಲಾಗಿದೆ. ಮನೆ ಮಾಲೀಕನಾಗಿ ಸಾಧು ಕೋಕಿಲಾ, ಹಾಗೂ ಕೇಶವನಾಗಿ ಕಾಣಸಿಗುವ ಚಿಕ್ಕಣ್ಣ.. ಇಬ್ಬರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುವ, ಪ್ರೇಕ್ಷಕರಿಗೆ ನಗಿಸುವ.. ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ಡೋಂಗಿ ಸ್ವಾಮಿಜಿಯಾಗಿ ಕಾಣಸಿಗುವ ಅಚ್ಯುತ್ ಕುಮಾರ್, ಪತ್ರಿಕೆ ಸಂಪಾದಕರಾಗಿ ಕಾಣಸಿಗುವ ಅವಿನಾಶ್, ಅನುಪಮಾ ದೊಡ್ಡಪ್ಪನಾಗಿರುವ ಪ್ರಕಾಶ್ ಬೆಳವಾಡಿ, ಎಲ್ಲರೂ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯ್ಸಿದ್ದಾರೆ. ಇನ್ನೂ ಚಿತ್ರದಲ್ಲಿ ತಮ್ಮದೇ ಪಾತ್ರದಲ್ಲಿ ಕಾಣಿಸಿಕೊಂಡಿರುವ ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾದೇವಿ ಅವ್ರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ.ನಟಸಾರ್ವಭೌಮನ ಸೂತ್ರಧಾರ ಪವನ್ ಒಡೆಯರ್, ಹಳೆಯ ಕಥೆಯನ್ನೇ ಹೇಳಿದ್ದರೂ.. ಹೇಳಿದ ರೀತಿ ಮಾತ್ರ ಬೇರೆ. ಹೌದು, ಹಳೆಯ ವೈನ್‌ನ್ನೇ ಹೊಸ ಬಾಟಲಿಗೆ ಹಾಕಿರುವ ಪವನ್, ನಿಮ್ಮ ಊಹೆಗಳನ್ನೆಲ್ಲಾ ತಲೆಕೆಳಗಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬುದ್ಧಿವಂತಿಕೆನಿಂದ ಚಿತ್ರಕಥೆಯನ್ನ ಹೆಣೆದಿದ್ದಾರೆ. ಇನ್ನೂ ನಟಸಾರ್ವಭೌಮನಲ್ಲಿ ಅಭಿಮಾನಿಗಳು ಕೇಕೆ ಹಾಕುವಂಥ ಅನೇಕ ಸಂಭಾಷಣೆಗಳಿವೆ. ಕನ್ನಡ, ಕನ್ನಡ ನೆಲ, ಹಾಗೂ ಡಾ.ರಾಜ್ ಕುಮಾರ್ ಬಗೆಗಿನ ಡೈಲಾಗ್ಸ್ ಕಿಕ್ ಕೊಡುತ್ವೆ. ಪುನೀತ್ ಸಿನಿಮಾ ಅಂದ್ರೆ ಅಲ್ಲೊಂದು ಪವರ್ ಇರುತ್ತೆ. ಕಾಲರ್ ಮೇಲೆ ಎತ್ತಿ ಕುಣಿಯುವಂಥ ಡ್ಯಾನ್ಸ್ ಇರುತ್ತೆ. ನಟಸಾರ್ವಭೌಮದಲ್ಲಿ ಇವೆರಡು ಇನ್ನೊಂದು ಹಂತಕ್ಕೆ ಹೋಗಿದೆ. ಹೌದು, ಪಿಟರ್ ಹೆನಿನ್ ಸಾಹಸ ನಿರ್ದೇಶನ ಅಭಿಮಾನಿಗಳ ಮೈ ನವಿರೇಳಿಸುತ್ತೆ. ಇನ್ನೂ ಪುನೀತ್ ಡ್ಯಾನ್ಸ್ ಬಗ್ಗೆಯಂತೂ ಕೆಮ್ಮಂಗಿಲ್ಲ. ಹಿಂದೆಂದೂ ಕಾಣದ ಸ್ಟೇಪ್ಸ್‌ಗಳನ್ನ ಪುನೀತ್ ಇಲ್ಲಿ ಹಾಕಿದ್ದಾರೆ.

ಭೂಶಣ್ ಹಾಗೂ ಜಾನಿ ಮಾಸ್ಟರ್ ಪುನೀತ್‌ರಿಂದ ರಿಸ್ಕಿ ಸ್ಟೇಪ್ಸ್‌ಗಳನ್ನ ಹಾಕಿಸಿದ್ದಾರೆ. ಇದೇ ಕಾರಣಕ್ಕೆ ಹಾಡು ಬಂದಾಗ ಅಭಿಮಾನಿಗಳೂ ಡ್ಯಾನ್ಸ್ ವಿಥ್ ಅಪ್ಪು ಎಂದು ಕುಣಿಯುತ್ತಾರೆ. ರಾಕ್ ಲೈನ್ ವೆಂಕಟೇಶ್ ಚಿತ್ರದ ಕ್ವಾಲಿಟಿ ವಿಚಾರದಲ್ಲಿ ಎಲ್ಲೂ ಕಾಂಪ್ರಮೈಸ್ ಆಗಿಲ್ಲ. ಚಿತ್ರಕ್ಕೆ ಬೇಕಿರುವ ಅಗತ್ಯತೆಗಳನ್ನ ಪೂರೈಸಿರುವ ರಾಕ್ ಲೈನ್, ಚಿತ್ರದ ಕಳೆಯನ್ನ ಹೆಚ್ಚಿಸಿದ್ದಾರೆ. ಚಿತ್ರಕ್ಕೊಂದು ಅದ್ಧೂರಿ ಮೆರಗು ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.ನಟಸಾರ್ವಭೌಮನನ್ನ ವೈದಿ ಅಚ್ಚುಕಟ್ಟಾಗಿ ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ. ಇನ್ನೂ ಚಿತ್ರದ ಹಿನ್ನಲೆ ಸಂಗೀತ ಅಭಿಮಾನಿಗಳಿಗೆ ಕಿಕ್ ಕೊಡುತ್ತೆ. ಒಟ್ನಲ್ಲಿ ನಟಸಾರ್ವಭೌಮ.. ಅಭಿಮಾನಿಗಳಿಗೆ ಪರ್ಫೆಕ್ಟ್ ಗಿಫ್ಟ್. ಅಭಿಮಾನಿಗಳಿಗಾಗಿ.. ಅಭಿಮಾನದಿಂದ ಮಾಡಿರುವ ಸಿನಿಮಾ ಇದು ಅನ್ನಲು ಅಡ್ಡಿ ಇಲ್ಲ. ಹಾಗಂತ ಕುಟುಂಬ ವರ್ಗ ಬೇಸರ ಮಾಡಿಕೊಳ್ಳುವಂಗಿಲ್ಲ. ಯಾಕಂದ್ರೆ ಫ್ಯಾಮಿಲಿ ಆಡಿಯನ್ಸ್‌ಗೂ ಇಷ್ಟವಾಗುವಂಥ ನಟಸಾರ್ವಭೌಮನಿವನು. ಕೊಟ್ಟ ಕಾಸಿಗೆ ಮೋಸ ಮಾಡದ ನಟಸಾರ್ವಭೌಮನನ್ನ ಅನಾಯಾಸವಾಗಿ, ಆರಾಮಾಗಿ.. ಒಂದು ಸಲ ನೋಡಬಹುದು.

LEAVE A REPLY

Please enter your comment!
Please enter your name here