ನಟಸಾರ್ವಭೌಮ ಭೂಷಣ್ ಮೋಡಿ – 1 ಮಿಲಿಯನ್ ದಾಟಿದ ರಾಜಣ್ಣನ ಮಗನ ಹಾಡು

0
216

ರಾಜಣ್ಣನ ಮಗ.. ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾ. ಗಾಂಧಿನಗರದ ಗಲ್ಲಿಗಳಲ್ಲಿ ನಿರೀಕ್ಷೆಯನ್ನ ಹುಟ್ಟು ಹಾಕಿರುವ ಇದೇ ರಾಜಣ್ಣನ ಮಗನಿಗೀಗ ಗೆಲುವಿನ ಸೂಚನೆಯೂ ಸಿಕ್ಕಿದೆ. ಇಂಥಹದ್ದೊಂದು ಸೂಚನೆಯನ್ನ ರಂಗಿ ಕೊಟ್ಟಿದ್ದಾಳೆ.ಹೌದು, ರಂಗಿ ನನ್ನ ಕಣ್ಣಿನಾಗ ನಿನ್ನದೇ ಭಂಗಿ ಹಾಡು, ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸುದ್ದಿಯಾಗ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಸಾಮಾಜಿಕ ಜಾಲತಾಣ ಯುಟ್ಯೂಬ್‌ನಲ್ಲಿ ಇದೇ ರಂಗಿಯ ಭಂಗಿಯನ್ನ ಭರ್ತಿ ಒಂದು ಮಿಲಿಯನ್ ಜನ ಕಣ್ತುಂಬಿಕೊಂಡಿದ್ದಾರೆ. ಅದು ಬರೀ ಒಂದು ವಾರಗಳಲ್ಲಿ. ಯಸ್, ಒಂದು ವಾರಗಳಲ್ಲಿ ಒಂದು ಮಿಲಿಯನ್ ಗಡಿಯನ್ನ ರಂಗಿ ದಾಟಿದ್ದಾಳೆ. ಇದು, ಸಹಜವಾಗಿ ರಾಜಣ್ಣನ ಮಗನ ಮುಖದಲ್ಲೊಂದು ಮಂದಹಾಸವನ್ನೂ ಮೂಡಿಸಿದೆ. ಅಂದ ಹಾಗೇ ಇಲ್ಲಿ ರಂಗಿಯಾಗಿ ಅಖಾಡವನ್ನ ರಂಗೇರಿಸಿರೋದು ಅಕ್ಸಾ ಖಾನ್. ಅಕ್ಸಾ ಖಾನ್ ಹೈದ್ರಾಬಾದಿನಾಕೆ. ತೆಲುಗು ನಾಡಿನಲ್ಲಿ ಅಕ್ಸಾ ಖಾನ್ ಚಿರಪರಿಚಿತೆ. ರಿಯಾಲಿಟಿ ಶೋಗಳಲ್ಲಿ ಎಲ್ಲರ ಗಮನ ಸೆಳೆದಿದ್ದ ಅಕ್ಸಾ, ರಾಜಣ್ಣನ ಮಗನ ಮೂಲಕ ಕನ್ನಡಕ್ಕೂ ಕಾಲಿಟ್ಟಿದ್ದಾರೆ. ಸೊಂಟ ಬಳುಕಿಸಿದ್ದಾರೆ. ಅಕ್ಸಾಳ ಇದೇ ಅಧಾಗೀಗ ಸಿನಿಪ್ರಿಯರು ಫಿದಾ ಆಗಿದ್ದಾರೆ.

ಸಂತೋಶ್ ವೆಂಕಿ ಹಾಗೂ ಶಮಿತಾ ಮಲ್ನಾಡ್ ಹಾಡಿರುವ ಇದೇ ಹಾಡನ್ನ, ಭೂಷಣ್ ನೃತ್ಯ ನಿರ್ದೇಶನ ಮಾಡಿರೋದು ವಿಶೇಷ. ಹೌದು, ನಟಸಾರ್ವಭೌಮದಲ್ಲಿ ಪುನೀತ್‌ರಿಂದ ಅದ್ಭುತವಾಗಿ ಡ್ಯಾನ್ಸ್ ಮಾಡಿಸಿದ್ದ ಭೂಷಣ್, ರಂಗಿಯನ್ನ.. ಕುಣಿಸಿದ್ದಾರೆ. ಇನ್ನೂ ರವಿ ಬಸ್ರೂರ್ ಸಂಗೀತ ನಿರ್ದೇಶನ ಹಾಡಿನ ಕಳೆಯನ್ನ ಹೆಚ್ಚಿಸಿದೆ.ಕೋಲಾರ ಸೀನು ನಿರ್ದೇಶನದಲ್ಲಿ ಸಿದ್ಧವಾಗಿರುವ ರಾಜಣ್ಣನ ಮಗದಲ್ಲಿ ನಾಯಕನಾಗಿ ಹರೀಶ್ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ನಿರ್ಮಾಣನೂ ನಾಯಕ ಹರೀಶ್ ಅವ್ರದ್ದೇ. ಹರೀಶ್‌ಗೆ ಇಲ್ಲಿ ನಾಯಕಿಯಾಗಿ ಅಕ್ಷತಾ ಕಾಣಿಸಿಕೊಂಡಿದ್ದಾರೆ. ಅಂದ ಹಾಗೇ ರಾಜಣ್ಣನ ಮಗ ಬೆಸಿಕಲಿ ಅಪ್ಪ ಮಗನ ಸುತ್ತ ಸುತ್ತುವ ಸಿನಿಮಾ. ಇನ್ನೂ ಇಲ್ಲಿ ತಂದೆಯ ಪಾತ್ರದಲ್ಲಿ ಚರಣ್ ರಾಜ್ ಕಾಣಿಸಿಕೊಂಡಿರೋದು ವಿಶೇಷ. ಅದೇನೆ ಇದ್ರೂ ಸದ್ಯ ಹಾಡಿನಿಂದ ಸದ್ದು ಮಾಡ್ತಿರುವ ರಾಜಣ್ಣನ ಮಗನ ರಂಗೀನ ದುನಿಯಾ ಹೇಗಿದೆ ಅನ್ನೋ ಪ್ರಶ್ನೆಗುತ್ತರ ಮುಂದಿನ ವಾರ ಸಿಗಲಿದೆ. ಅಲ್ಲಿವರೆಗೂ ರಂಗಿಯನ್ನ ನೀವೊಮ್ಮೆ ನೋಡಿ ಬಿಡಿ.

LEAVE A REPLY

Please enter your comment!
Please enter your name here