ಕೆಜಿಎಫ್ ಮೂಲಕ‌ ಲಹರಿಯ ಹೊಸ‌ ದಾಖಲೆ – ದಾಖಲೆ‌ ಮೊತ್ತಕ್ಕೆ ಆಡಿಯೋ ರೈಟ್ಸ್

0
97

ಕೆ.ಜಿ.ಎಫ್.. ಸದ್ಯದ ಸೆನ್ಸೇಶನ್. ಇನ್ನೇನು ಇಪ್ಪತ್ತು ದಿನಗಳಲ್ಲಿ ಚಿತ್ರಮಂದಿರಕ್ಕೆ ಬರಲಿರುವ ಕೆ.ಜಿ.ಎಫ್.. ಇದೀಗ ಬಿಡುಗಡೆಗೂ ಮುನ್ನ, ದಾಖಲೆಯೊಂದನ್ನ ಬರೆದಿದೆ. ಕೆ.ಜಿ.ಎಫ್‌ನ ಆಡಿಯೋ ರೈಟ್ಸ್ ಬರೋಬ್ಬರಿ 3 ಕೋಟಿ 60 ಲಕ್ಷಕ್ಕೆ ಬಿಕರಿಯಾಗಿದೆ. ಯಸ್, ಇದು.. ಸತ್ಯ.. ಸತ್ಯ.. ಸತ್ಯ.. ಕನ್ನಡದ ಕೆಜಿಎಫ್ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆಯಲ್ಲಾ? ಅದರಲ್ಲಿ ಹಿಂದಿ ಒಂದನ್ನು ಹೊರತು ಪಡಿಸಿ ಮಿಕ್ಕ ನಾಲ್ಕೂ ಭಾಷೆಗಳ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿದೆ. ಆ ಮೊತ್ತ ಬರೋಬ್ಬರಿ 3 ಕೋಟಿ 60 ಲಕ್ಷ. ನಿಮಗೆ ಗೊತ್ತಿರಲಿ, ಕನ್ನಡ ಚಿತ್ರರಂಗದ ಮಟ್ಟಿಗೆ ಲಹರಿ ಆಡಿಯೋ ಸಂಸ್ಥೆ ತುಂಬಾನೇ ಮಹತ್ವದ್ದು. ದಶಕಗಳಿಂದ.. ಚಿತ್ರರಂಗಕ್ಕೆ ತನ್ನದೇ ಆದ ಸೇವೆಯನ್ನ ಸಲ್ಲಿಸುತ್ತಾನೇ ಬರ್ತಿದರುವ ಲಹರಿ ಆಡಿಯೋ ಸಂಸ್ಥೆ ಬರೀ ಕನ್ನಡದಲ್ಲಷ್ಟೇ ಅಲ್ಲ ತಮಿಳು, ತೆಲುಗುದಲ್ಲೂ ಬೇರು ಬಿಟ್ಟಿದೆ. ಹರಡಿಕೊಂಡಿದೆ. ಇಂಥ ಲಹರಿ ಸಂಸ್ಥೆ ಇದೀಗ ಕೆ.ಜಿ.ಎಫ್‌ನ ಹಾಡುಗಳ ಹಕ್ಕುಗಳನ್ನ ಖರೀದಿ ಮಾಡಿದೆ. ಅದು ಕೂಡಾ ದಾಖಲೆಯ ಮೊತ್ತ ಕೊಡುವ ಮೂಲಕ.

ಅಸಲಿಗೆ ಕನ್ನಡದ ಮಟ್ಟಿಗೆ ಲಹರಿ ಆಡಿಯೋ ಸಂಸ್ಥೆ ಸಾರ್ವಕಾಲಿಕ ದಾಖಲೆಗಳ ರೂವಾರಿ. ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಳ್ಳೋದು ಲಹರಿಯ ಸ್ಪೆಷಾಲಿಟಿ. ಆದರೆ ಈಗ ಈ ಸಂಸ್ಥೆ ಮಾಡಿರೋ ದಾಖಲೆ ಮಾತ್ರ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳ ಚಿತ್ರರಂಗದವರೂ ಬೆರಗಾಗಿದ್ದಾರೆ. ಇನ್ನೂ ಕೆ.ಜಿ.ಎಫ್ ಚಿತ್ರದ ಹಾಡುಗಳಿಗೆ ಭರ್ತಿ 3 ಕೋಟಿ 60 ಲಕ್ಷ ಕೊಡುವ ಮೂಲಕ, ಹೊಸ ಇತಿಹಾಸ ಬರೆದಿರುವ ಲಹರಿ ಸಂಸ್ಥೆಯ ಒಡೆಯ ಲಹರಿ ವೇಲು ಈ ಹಿಂದೆ ತಾವೇ ಸೃಷ್ಟಿಸಿದ್ದ ದಾಖಲೆಯನ್ನು ಈ ಮೂಲಕ ಬ್ರೇಕ್ ಮಾಡಿದಂತಾಗಿದೆ. 1992ರಲ್ಲಿ ದಳಪತಿ ಚಿತ್ರದ ಆಡಿಯೋ ಹಕ್ಕುಗಳನ್ನು ಈ ಸಂಸ್ಥೆ ಎಪ್ಪತೈದು ಲಕ್ಷ ಕೊಟ್ಟು ಖರೀದಿಸಿತ್ತು. ಈ ಸುದ್ದಿ ಕೇಳಿ ಅಂದಿನ ದಿನಗಳಲ್ಲೇ ಎಲ್ಲರೂ ಬೆರಗಾಗಿದ್ದರು. ಇಂಥಾದ್ದೊಂದು ದಾಖಲೆಯ ನಂತರ ಬಾಹುಬಲಿ ಚಿತ್ರದ ಆಡಿಯೋ ಹಕ್ಕುಗಳನ್ನೂ ಕೂಡಾ ಭಾರೀ ಮೊತ್ತಕ್ಕೇ ಖರೀದಿಸಲಾಗಿತ್ತು. ಇದೀಗ ಖುದ್ದು ಲಹರಿ ಸಂಸ್ಥೆ ಕೆಜಿಎಫ್ ಮೂಲಕ ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಂಡಿದೆ. ಕೆಜಿಎಫ್ ಚಿತ್ರದ ಟೀಸರ್‌ಗೆ ದೇಶಾಧ್ಯಂತ ವ್ಯಾಪಕ ಮೆಚ್ಚುಗೆ ಕೇಳಿ ಬರುತ್ತಿದೆ. ಕನ್ನಡ ಚಿತ್ರವೊಂದು ಬೇರೆ ಭಾಷೆಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ, ಕನ್ನಡ ಚಿತ್ರರಂಗದ ಗರಿಮೆಯನ್ನು ಎತ್ತಿ ಹಿಡಿಯುತ್ತಿರೋದರಿಂದ ಖುಷಿಗೊಂಡಿರೋ ವೇಲು ಅವರು ದಾಖಲೆ ಮೊತ್ತಕ್ಕೆ ಆಡಿಯೋ ಹಕ್ಕು ಖರೀದಿ ಮಾಡಿದ್ದಾರಂತೆ.

LEAVE A REPLY

Please enter your comment!
Please enter your name here