ಕರ್ನಾಟಕದಲ್ಲಿ ಮತ್ತೆ ಪರಭಾಷೆ ಸಿನಿಮಾದ ದರ್ಬಾರ್ – ಸರ್ಕಾರ್ಗೆ ಸಿಕ್ತು 680 ಶೋ

0
117

ಅಂದು ಬೀದಿಗಿಳಿದು ಡಬ್ಬಾ ಡಬ್ಬಿಂಗ್ ವಿರುದ್ಧ ಒಟ್ಟಾಗಿ ಹೋರಾಡಿದ್ದ, ಕನ್ನಡ ಚಿತ್ರರಂಗ ಇದೀಗ ಮತ್ತೊಮ್ಮೆ ಬೀದಿಗಿಳಿಯುವ ಅನಿವಾರ್ಯತೆ ಇದೆ. ಇಂಥಹದ್ದೊಂದು ಅನಿವಾರ್ಯತೆ ಎದುರಾಗಿದ್ದು ತಮಿಳಿನ ಸರ್ಕಾರ್ ಅನ್ನುವ ಸಿನಿಮಾದಿಂದ ಅನ್ನೋದೇ ಇಲ್ಲಿನ ವಿಪರ್ಯಾಸ ಹಾಗೂ ದುರಂತ. ಯಸ್, ಸರ್ಕಾರ್, ದೀಪಾವಳಿ ಹಬ್ಬದ ಪ್ರಯುಕ್ತ ನಿನ್ನೆ ಬಿಡುಗಡೆಯಾದ ಸಿನಿಮಾ. ವಿಶ್ವದ ಮೂಲೆ ಮೂಲೆಯಲ್ಲೂ ತೆರೆಗೆ ಬಂದು, ಗಲ್ಲಾಪೆಟ್ಟಿಗೆ ಕೊಳ್ಳೇ ಹೊಡೆಯುತ್ತಿರುವ ಸರ್ಕಾರ್, ಸಹಜವಾಗಿ ಕರ್ನಾಟಕದಲ್ಲಿ ಬಿಡುಗಡೆಯಾಗಿದೆ. ಆಗ್ಲಿ, ತೊಂದರೆ ಇಲ್ಲಾ. ಆದ್ರೆ ಇದೇ ಬಿಡುಗಡೆಗೆ ಒಂದು ಇತಿ ಮಿತಿ ಇರಬೇಕಲ್ಲವೇ. ಪರಭಾಷಾ ಚಿತ್ರಗಳಿಗೆ ಕರ್ನಾಟಕ ತವರು ಮನೆ ಇದ್ದ ಹಾಗೇ ಅನ್ನುವ ಒಂದು ಕಾರಣಕ್ಕೆ ಮನಸೋ ಇಚ್ಚೆ ಚಿತ್ರವನ್ನ ಬಿಡುಗಡೆ ಮಾಡಿದ್ರೇ ಸಹಿಸುವದಾದ್ರೂ ಹೇಗೆ. ಹೀಗೊಂದು ಪ್ರಶ್ನೆಯನ್ನ ಇದೀಗ ಕನ್ನಡ ಸಿನಿಪ್ರೇಮಿಗಳು ಕೇಳುತ್ತಿದ್ದಾರೆ. ಕೇಳಲಾಗ್ತಿರುವ ಪ್ರಶ್ನೆಯಲ್ಲೂ ಅರ್ಥವಿದೆ. ಯಾಕಂದ್ರೆ ತಮಿಳಿನ ಸರ್ಕಾರ್‌ನನ್ನ ಕರ್ನಾಟಕದಲ್ಲಿ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗಿದೆ. ದಿನಕ್ಕೆ 630 ಶೋಗಳನ್ನ ನೀಡಲಾಗಿದೆ.

ಇದ್ಯಾವ ನ್ಯಾಯ. ಇದ್ಯಾವ ಲೆಕ್ಕ.ಇಲ್ಲಿ ಇನ್ನೊಂದು ದುರಂತದ ಸಂಗತಿನೂ ಇದೆ. ಹೌದು, ನಿನ್ನೆ ಬಿಡುಗಡೆಗೊಂಡ ಸರ್ಕಾರ್ ಚಿತ್ರಕ್ಕೆ ಚೆನೈನಲ್ಲಿ ಸಿಕ್ಕಿರೋದು ಬರೀ 35 ಚಿತ್ರಮಂದಿರಗಳು. ಆದ್ರೆ ಅದೇ ಬೆಂಗಳೂರಿನಲ್ಲಿ ಸರ್ಕಾರ್ ಭರ್ತಿ 80 ಚಿತ್ರಮಂದಿರಗಳಲ್ಲಿ ಬಂದು ಕುಂತಿದ್ದಾನೆ. ಕನ್ನಡಿಗರು ಕೆಣಕುವಂತೆ ಕೇಕೆ ಹಾಕಿ ಅಣುಕಿಸುತ್ತಿದ್ದಾನೆ. ಇದು ಅಚ್ಚರಿ ಅನಿಸಿದ್ರೂ ಸತ್ಯ. ತಮಿಳು ಚಿತ್ರಕ್ಕೆ ತಮಿಳು ಚಿತ್ರಮಂದಿರಗಳೇ ಕೈ ಬಿಟ್ಟಾಗ, ನಮ್ಮವರ್ಯಾತಕೆ ಪಕ್ಕದ ಮನೆಯ ಮಗನಿಗೆ ಅಷ್ಟೊಂದು ಪ್ರೀತಿ ಕೊಡ್ತಿದ್ದಾರೆ ಅನ್ನೋದೇ ಉತ್ತರವಿರದ ಮಿಲಿಯನ್ ಡಾಲರ್ ಪ್ರಶ್ನೆ . ಇನ್ನೂ ಸರ್ಕಾರ್‌ಗೆ ವಿಶಾಲ ಹೃದಯದವರಾಗಿರುವ ಕನ್ನಡಿಗರು 80 ಚಿತ್ರಮಂದಿರಗಳನ್ನ ಬಿಟ್ಟು ಕೊಟ್ಟ ತಪ್ಪಿಗೆ, ಚಿತ್ರಮಂದಿರದ ಮಾಲೀಕರ ಧೈರ್ಯ ಮತ್ತಷ್ಟು ಹೆಚ್ಚಿದೆ.

ಹಾಗಾಗೇ, ಮೂರೊತ್ತು ಸರ್ಕಾರ್ ಚಿತ್ರದ ಪ್ರದರ್ಶನವನ್ನ ಮಲ್ಟಿಪ್ಲೆಕ್ಸ್‌ನವರು ಮಾಡ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ಬೆಂಗಳೂರಿನ ಯಶವಂತಪುರ, ವೈಟ್‌ಫೀಲ್ಡ್, ಮಾರತಹಳ್ಳಿಯ ಪಿವಿಆರ್‌ಗಳಲ್ಲಿ ಸರ್ಕಾರ್‌ಗೆ ಭರ್ತಿ 14 ಶೋಗಳನ್ನ ಮೀಸಲಿಡಲಾಗಿದೆ.ಅಂದ ಹಾಗೇ ಸರ್ಕಾರ್ ಕಬಾಲಿಯ ದಾಖಲೆಯನ್ನೂ ಮುರಿದಿದ್ದಾನೆ. ಹೌದು, ಹಿಂದೆ ರಾಜ್ಯದಲ್ಲಿ ಕಬಾಲಿ 580ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು. ಆದ್ರೀಗ ಸರ್ಕಾರ್ 630ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತನ್ನ ಆಳ್ವಿಕೆಯನ್ನ ನಡೆಸಿದ್ದಾನೆ. ಇಷ್ಟೇ ಅಲ್ಲ ಸರ್ಕಾರ್ ಭಜನೆ ಅನೇಕ ಚಿತ್ರಮಂದಿರಗಳಲ್ಲಿ ಬೆಳ್ಳಂ ಬೆಳ್ಳಗ್ಗೆ ಆರು ಘಂಟೆನಿಂದನೇ ನಡೆಯುತ್ತಿದೆ. ಇದಕ್ಕಿಂತ ಇನ್ನೊಂದು ದುರಂತ ಇನ್ನೆಲ್ಲಿದೆ.

ನಿಮಗೆ ಗೊತ್ತಿರಲಿ, ಕರ್ನಾಟಕದಲ್ಲಿ ಸರ್ಕಾರ್, ಹಬ್ಬದ ಪ್ರಯುಕ್ತ ತೋರಿಸುತ್ತಿರುವ ಇದೇ ಸರ್ವಾಧಿಕಾರದಿಂದ ಕನ್ನಡ ಚಿತ್ರಗಳು ಚಿತ್ರಮಂದಿರದಿಂದ ಕಾಣೆಯಾಗ್ತಿವೆ. ಪ್ರದರ್ಶನದ ಸಂಖ್ಯೆಗಳಲ್ಲಿ ಭಾರೀ ಇಳಿಮುಖವಾಗ್ತಿದೆ. ಹೌದು, ಭರ್ತಿ 630 ಚಿತ್ರಗಳನ್ನ ಸರ್ಕಾರ್ ಆವರಿಸಿಕೊಂಡ ಕಾರಣ, ಯಶಸ್ವಿ ಪ್ರದರ್ಶನ ಕಾಣ್ತಿದ್ದ ವಿಕ್ಟರಿ 2 ಚಿತ್ರವನ್ನ ಅನೇಕ ಕಡೆ ಎತ್ತಂಗಡಿ ಮಾಡಲಾಗಿದ್ದರೆ, ಇನ್ನೂ ಕೆಲವಡೇ ಪ್ರೇಕ್ಷಕರೇ ಬಾರದ ಶೋಗಳನ್ನ ನೀಡಲಾಗಿದೆ. ಇನ್ನೂ ನವೆಂಬರ್ 1ಕ್ಕೆ ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಂಡಿದ್ದ ಅಮ್ಮಚ್ಚಿಯೆಂಬ ನೆನಪು ಚಿತ್ರದ ಕಥೆಯಂತೂ ಹೇಳತೀರದು.ಸದ್ಯ ಕನ್ನಡಿಗರ ಉದಾರ ಮನಸ್ಥಿತಿಯ ಪರಿಣಾಮ ಅನ್ನುವಂತೆ, ಸರ್ಕಾರ್ ಕರ್ನಾಟಕದ ನೆಲದಲ್ಲಿ ನೆಮ್ಮದಿಯಾಗಿ ಬಂದು ಕುಂತಿದ್ದಾನೆ. ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿದ್ದಾನೆ. ಇನ್ನೂ ಸರ್ಕಾರ್‌ಗೆ 630 ಚಿತ್ರಮಂದಿರಗಳನ್ನ ಬಿಟ್ಟುಕೊಟ್ಟಿರುವ ನಾವು, ರಜಿನಿಯ 2.0ಗೆ ಇನ್ನೆಷ್ಟು ಚಿತ್ರಮಂದಿರಗಳನ್ನ ಮುಕ್ತ ಮನಸಿನಿಂದ ಬಿಟ್ಟು ಕೊಡಲಿದ್ದೇವೆ ಅನ್ನುವ ಆತಂಕದಲ್ಲೇ ಕನ್ನಡಿಗರು ಇರುವ ಹೊತ್ತಿನಲ್ಲೇ, ಹೋರಾಟ ಮಾಡಬೇಕಿದ್ದ ಕನ್ನಡ ಹೋರಾಟಗಾರರು, ಕಡಿವಾಣ ಹಾಕಬೇಕಿದ್ದ ಕರ್ನಾಟಕ ಚಲನಚಿತ್ರವಾಣಿಜ್ಯ ಮಂಡಳಿ, ಪ್ರಶ್ನೆ ಮಾಡಬೇಕಿದ್ದ ಚಿತ್ರರಂಗದ ಕಲಾವಿದರು, ಮೌನಕ್ಕೆ ಶರಣಾಗಿರೋದು.. ಏನೂ ಗೊತ್ತೇ ಇಲ್ಲ ಅನ್ನುವಂತಿರೋದು, ಕನ್ನಡಿಗರ ದುರಾದೃಷ್ಟವೇ ಸರಿ.

LEAVE A REPLY

Please enter your comment!
Please enter your name here